ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ, ಕಾವ್ಯ ಮತ್ತು ನೆಲ ಮೂಲದ ಸಂವೇದನೆಗಳು ಕನ್ನಡ ಕವಿಗಳಲ್ಲಿ ಬೆರೆತುಹೋಗಿವೆ. ಆದ್ದರಿಂದಲೇ ಪಂಪ ಜೈನ ಧರ್ಮಕ್ಕೆ ಬದ್ಧನಾಗಿ ಕಾವ್ಯ ಧರ್ಮವನ್ನು ನಿರ್ವಹಿಸುವಾಗ ಆ ಕೃತಿಯಲ್ಲಿ ನೆಲದ ಬಗೆಗಿನ ಬದ್ಧತೆಯನ್ನು ಪ್ರಕಟಮಾಡಿ, ಏಕ ಕಾಲಕ್ಕೆ ಮೂರು ಧರ್ಮಗಳಿಗೆ ಬದ್ಧನಾಗುವುದು. ಈ ಹಿನ್ನೆಲೆಯಲ್ಲಿಯೆ ಪಂಪನ ಕೃತಿಗಳು ಕನ್ನಡ-ಬನವಾಸಿ-ನಾಡು, ನುಡಿ ಪರವಾದ ನಿಲುವುಗಳನ್ನು ಪ್ರಕಟಿಸುತ್ತಲೇ ಜೈನ ಧರ್ಮದ ಬಗೆಗಿನ ಬದ್ಧತೆಯನ್ನು ಉಳಿಸಿಕೊಂಡು ಅಂತಿಮವಾಗಿ ಕಾವ್ಯದ ನಿರ್ವಹಣೆಯಲ್ಲಿ ಕವಿಯಾಗಿಯೂ ನಿಂತುಬಿಡುತ್ತಾನೆ. ಹೀಗೆ ಮೂರು ‘ಧರ್ಮ’ಗಳಿಗೆ ಬದ್ಧನಾದ ಪಂಪನಂತೆಯೆ ರಾಘವಾಂಕನು ಸಹ ಬಹಳ ವಿಶಿಷ್ಟವಾಗಿ ‘ಹರಿಶ್ಚಂದ್ರ ಕಾವ್ಯ’ದಲ್ಲಿ ಕಾಣಿಸಿಕೊಳ್ಳುತ್ತಾನೆ.

‘ಹರಿಶ್ಚಂದ್ರ ಕಾವ್ಯ’ ಮೂಲತಃ ಪುರಾಣ ಮೂಲದ ವಸ್ತುವನ್ನು ಒಳಗೊಂಡಿದೆ. ಇಂತಹ ವಸ್ತುವನ್ನು ರಾಘವಾಂಕ ಕಾವ್ಯ ಮಾಡುವಾಗ ತನ್ನ ಕಾಲ-ದೇಶದ ಸಂವೇದನೆಗಳನ್ನು ಉಚಿತವಾದ ರೀತಿಯಲ್ಲಿ ಪ್ರಕಟಮಾಡುತ್ತಾನೆ. ಇದರೊಂದಿಗೆ ಕವಿಯಾಗಿಯೂ ಶೈವ ಧರ್ಮೀಯನಾಗಿಯೂ ಸಮರ್ಥವಾಗಿ ನಿಲ್ಲುತ್ತಾನೆ. ಈ ನಿಟ್ಟಿನಲ್ಲಿ ಸಹ ಕಾವ್ಯವನ್ನು ಪರಿಶೀಲಿಸಬಹುದೆಂದು ಭಾವಿಸುತ್ತೇನೆ.

ರಾಘವಾಂಕ ತನ್ನ ಕಾವ್ಯದ ಕತೆಯ ನಿರ್ವಹಣೆಯಲ್ಲಿ ಮೂಲಕತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾನೆ. ಈ ನಡುವೆ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ತನ್ನ ಮೂರೂ ಧರ್ಮಗಳ ಸೂಕ್ತ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿ ಸಾಗುವ ಕತೆ ಸಹೃದಯರಿಗೆ ಹಲವು ಕ್ಷ-ಕಿರಣಗಳನ್ನು ಬೀರುತ್ತದೆ.

ಕವಿ ಶೈವ; ವೀರಶೈವನಲ್ಲ. ಕಾರಣ, ಸ್ಥಾವರ-ದೇವಾಲಯ ಮೊದಲಾದ ಕಲ್ಪನೆಗಳನ್ನು ನಿರಾಕರಿಸುವ ವೀರಶೈವ ತಾತ್ವಿಕತೆಗೆ ಪ್ರತ್ಯೇಕವಾಗಿ ನಿಲ್ಲುವ ಶೈವ ಧಾರ್ಮಿಕ ಚೌಕಟ್ಟಿನಲ್ಲಿ ರಾಘವಾಂಕ ಕಾಣುತ್ತಾನೆ. ಈ ಹಿನ್ನೆಲೆಯಲ್ಲಿ ರಾಘವಾಂಕನು ಶೈವನೂ ಅದರ ಸಾಂಸ್ಥಿಕ ಧರ್ಮದ ಅಧಿಕೃತ ದೇವನಾದ ವಿರೂಪಾಕ್ಷನ ಭಕ್ತನೂ ಆಗಿ ಕಾಣುತ್ತಾನೆ. ಸಾತ್ವಿಕನಾದ ವಸಿಷ್ಠನನ್ನು ಪ್ರೀತಿಸುವ ರಾಘವಾಂಕ ಇವನನ್ನು ಶೈವನನ್ನಾಗಿ ಕಂಡರಿಸುತ್ತಾನೆ. ಇವನ ಆಶ್ರಮಕ್ಕೆ ಹಂಪೆಯನ್ನು ನೆಲೆಯನ್ನಾಗಿಸುತ್ತಾನೆ. ತನ್ನ ಶಿವನನ್ನು ವಿರೂಪಾಕ್ಷನಲ್ಲಿ ಕಾಣುತ್ತಾನೆ. ಇವನ ಸನ್ನಿಧಿಗೆ ದೂರದ ಅಯೋದ್ಯಾಪುರದ ಅರಸ ಮತ್ತು ತನ್ನ ಕಾವ್ಯನಾಯಕನೂ ಆದ ಹರಿಶ್ಚಂದ್ರನನ್ನು ಬೇಟೆಯ ನೆಪದಲ್ಲಿ ಇಲ್ಲಿಗೆ ಕರೆತರುತ್ತಾನೆ. ಕಥಾವಸ್ತುವಿನ ದೃಷ್ಟಿಯಿಂದ ಬೇರೊಂದು ಧರ್ಮದ ಕೇಂದ್ರಕ್ಕೆ ಕರೆದೊಯ್ಯಬಹುದಿತ್ತು. ಆದರೆ ಅದಕ್ಕೆ ಹೊರತಾಗಿ ತನ್ನ ಸಾಂಸ್ಥಿಕ ಧರ್ಮವಾದ ಶೈವ ಧರ್ಮ ಮತ್ತು ಅದರ ಪ್ರತೀಕಗಳಲ್ಲೊಂದಾದ ಶೈವ – ಇದಕ್ಕೆ ಬದ್ಧನಾಗಿಯೇ ಕವಿ ಅಂತ್ಯದವರೆಗೂ ನಿಂತುಬಿಡುತ್ತಾನೆ. ಹೀಗೆ ನಿಲ್ಲುವಾಗ ಕಾವ್ಯ ಸಂದರ್ಭಕ್ಕೆ ಚ್ಯುತಿ ತರುವುದಿಲ್ಲ. ಹೀಗಾಗಿ ರಾಘವಾಂಕನ ಸಾಂಸ್ಥಿಕ ಧರ್ಮಪರವಾದ ಜಾಗೃತಿಪ್ರಜ್ಞೆ ತನ್ನ ಕಾವ್ಯ ನಿರ್ವಹಣೆಯಲ್ಲಿ ಎಲ್ಲಿಯೂ ಸೋತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಈ ಚರ್ಚೆಗೆ ಪೂರಕವಾಗಿ ಈ ಪದ್ಯಗಳನ್ನು ಗಮನಿಸಬೇಕು.
ಶಿವಪೂಜೆಯಂ ಮಾಡದವನು ಗುರ್ವಾಜ್ಞೆಗೆ
ಟ್ಟವನು…..
* * *
ಮೇಲಿನ್ನು ನಾನಾಳ್ವ ದೇಶದೊಳು ಬೇಡದಂ
ತೋಲೈಸದಂತೆ ಕೃಷಿ ವ್ಯವಸಾಯವಂ ಮಾಡ
ದಾಲಯಂಗಟ್ಟಿರದೆಯವಧಿಯೊಳು ಹೊನ್ನ ನಿರ್ಣಯಿಸುವುದು ಬೇಗವೆನಲು
ಭೂಲೋಲನದಕೊಡಂಬಡಲು, ಸಪ್ತ ದ್ವೀಪ
ಜಾಲವೆಲ್ಲೆನ್ನವವಱಂದ ಹೊಱಗಾವುದೆಂ
ದಾಲಿಸಲು ಹೇಮಕೂಟಂ ವಾರಣಾಸಿಗಳು ಹೊಱಗು
ಮುನಿ ಕೇಳೆಂದ ||

……..
ಕಳೆಗೆ ತೆಕ್ಕವು ಮಾರಿ ಮೃತ್ಯುಗಿತ್ಯುಗಳ ಬಲೆ
ಗೊಳಗಾಗದಧಿಕ ಪುಣ್ಯದ ಬೀಡು ಮಂಗಳದ
ನಿಳಯ ಮುಕ್ತಿಯ ಮೂಲವೆನಿಸುವವು ಕಾಶಿ ಹಂಪೆಗಳು
ಮುನಿ ಕೇಳೆಂದನು ||
* * *
………..
ವಸುಸತ್ಯ ಕೀರ್ತಿಯೇ ಮಂತ್ರಿಯಾಗಲಿ ತರುಣ
ಶಶಿಮೌಳಿಯೇ ದೈವವಾಗಲೆಮ್ಮಿಳೆಯ ಪಾ
ಲಿಸುವ ವಿಶ್ವಾಮಿತ್ರ ನಿತ್ಯನಾಗಲಿಯೆನುತ ಬೇಡಿಕೊಂಡಿಂತೆಂದಳು ||
* * *
ಪೊಡವೀಶ ಕೇಳುಭಯ ಕುಲಶುದ್ಧೆಯಲ್ಲದಿ
ರ್ದಡೆ………
………….
ಮೃಡನಲ್ಲದನ್ಯ ದೈವಕ್ಕೆ ನಮಿಸಿದಡೆ….||

ಈ ಪದ್ಯಗಳ ಪ್ರಕಾರ ಹರಿಶ್ಚಂದ್ರನು ಶಿವ ಮತ್ತು ಅವನ ಹೆಸರಿನ ಧರ್ಮಕ್ಕೆ ಬದ್ಧನಾಗಿದ್ದಾನೆ. ಈ ನಿಟ್ಟಿನಲ್ಲಿ-ಹರಿಶ್ಚಂದ್ರನು ಲಾಳ ದೇಶದ ಅರಸ. ಇದರ ವ್ಯಾಪ್ತಿ ಖಚಿತವಾಗಿಲ್ಲದಿರುವುದು ಕಾವ್ಯದ ಸಂದರ್ಭದಲ್ಲಿ ಮುಖ್ಯವೇನೂ ಅಲ್ಲ. ಆದರೂ ಶಿವನು ವಿರೂಪಾಕ್ಷ ಮತ್ತು ವಿಶ್ವನಾಥನ ಹೆಸರಿನಲ್ಲಿ ಕ್ರಮವಾಗಿ ನೆಲೆಸಿರುವ ಹಂಪೆ ಮತ್ತು ಕಾಶಿ ಪ್ರದೇಶಗಳು ಲೌಕಿಕ ಅರಸರ ರಾಜ್ಯದ ವ್ಯಾಪ್ತಿಯ ಒಳಗಡೆಯೇ ಇದ್ದರೂ ಅವರಿಗೆ ಸೇರುವುದಿಲ್ಲ, ಸೇರಿಲ್ಲ. ಕಾರಣ, ಇದರ ಒಡೆಯ ಅಲೌಕಿಕ ಶಿವ. ಹೀಗೆ ಕವಿ ಭರತಖಂಡದ ವಿಸ್ತಾರ ಭೂಭಾಗವನ್ನು ಹರಿಶ್ಚಂದ್ರನಿಗೆ ಅಥವಾ ಅವನ ಸ್ಥಾನದ ಇತರೆ ಅರಸರಿಗೆ ಒಪ್ಪಿಸಿದರೂ ಅದರ ಚೌಕಟ್ಟಿನ ಒಳಗೆ ಬರುವ ಈ ತಾಣಗಳನ್ನು ಅವರಿಂದ ಬೇರ್ಪಡಿಸುತ್ತಾನೆ. ಅದಕ್ಕೆ ಕಾರಣ, ಇವು ಶಿವ ಸನ್ನಿಧಿಗಳು. ಇವುಗಳ ಒಡೆಯ ಶಿವ. ಆದ್ದರಿಂದ ಈ ಪವಿತ್ರ ಎಂಬ ತಾಣಗಳನ್ನು ‘ಕನಿಷ್ಠ’ ಮಾತ್ರರಾದ ಅರಸರಿಗೆ ಒಪ್ಪಿಸುವುದು ಕವಿಗೆ; ಅದರಲ್ಲೂ ಶಿವಕವಿಗೆ (ಅದರಲ್ಲೂ ಹರಿಹರನ ಶಿಷ್ಯನಿಗೆ) -ಅನಿಷ್ಠದ ಮಾತು. ಆದ್ದರಿಂದ ಪಾರಂಪರಿಕವಾಗಿ ಪವಿತ್ರ ಎನಿಸಿಕೊಂಡು ಉಳಿದು ಬಂದ ಈ ಪ್ರದೇಶಗಳನ್ನು ಶಿವನಿಂದ ಬೇರ್ಪಡಿಸದಿರುವುದು ಹಾಗೂ ಇದರ ಅಧಿಪತ್ಯವನ್ನು ಲೌಕಿಕ ಅರಸರಿಗೆ ಒಪ್ಪಿಸದಿರುವುದು-ಈ ಎರಡರ ಮೂಲಕ ಕವಿ ಶಿವ ಮತ್ತು ಶೈವ ಸಾಂಸ್ಥಿಕ ಧರ್ಮಕ್ಕೆ ಬದ್ಧನಾಗಿ ನಿಲ್ಲುವುದು ಇಲ್ಲಿ ವೇದ್ಯಗೊಳ್ಳುತ್ತದೆ.

ಈ ಚರ್ಚಾಭಾಗದಲ್ಲಿ ಒಂದು ವಿರೋಧಾಭಾಸವಿದೆ. ಅದೆಂದರೆ, ಈಗಾಗಲೇ ಹೇಳಿರುವಂತೆ ಕಾಶೀಪಟ್ಟಣಕ್ಕೆ ಲೌಕಿಕ ಅರಸನಿಲ್ಲ; ಅದರ ಅಧಿಪತ್ಯ ಶಿವನದ್ದೇ; ಎಂದು ಹೇಳಿದೆ. ಆದರೆ ಚಂದ್ರಮತಿ ಪ್ರಸಂಗದಲ್ಲಿ ಈಕೆ ಕಾಶೀಪಟ್ಟಣದ ಅರಸನ ಮಗನ ಕೊಲೆಯ ವಿಚಾರದಲ್ಲಿ ತಾನೇ ಆರೋಪಿಯಾಗುತ್ತಾಳೆ. ಇಲ್ಲಿ ಕಾಶೀ ಪಟ್ಟಣದ ಅರಸ ಎಂಬುದು ಅದರ ಅರಸ ಶಿವ ಅಲ್ಲ, ಲೌಕಿಕ ಅರಸ ಎಂದಾಗುತ್ತದೆ. ಈ ರೀತಿಯ ವಿರೋಧಾಭಾಸ, ಅಥವಾ ದ್ವಂದ್ವವು ಕವಿಯು ಶಿವ ಮತ್ತು ಶಿವಧರ್ಮದ ಪಾರಮ್ಯವನ್ನು ಎತ್ತಿಹಿಡಿಯುವ ಭರದಲ್ಲಿ ಘಟಿಸಿದೆ ಎಂದು ಭಾವಿಸಬೇಕಾಗುತ್ತದೆ.
* * *

ಹೀಗೆ ಸಾಂಸ್ಥಿಕ ಧರ್ಮಕ್ಕೆ ಬದ್ಧನಾದ ಕವಿ ತನ್ನ ಕಾವ್ಯ ಧರ್ಮಕ್ಕೂ ವಿಶಿಷ್ಟವಾಗಿ ಅಂಟಿಕೊಳ್ಳುತ್ತಾನೆ. ಕತೆಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಿಕೊಳ್ಳುವುದಿಲ್ಲ. ಮಾಡಿಕೊಳ್ಳಬಾರದೆಂದೇನೂ ಇಲ್ಲ. ಆದರೆ ಇಂತಹ ಬದಲಾವಣೆಗಳನ್ನು ಮಾಡಿಕೊಳ್ಳದೆಯೂ ಕಾವ್ಯ ಧರ್ಮವನ್ನು ಪಾಲಿಸುವುದು ಪ್ರತಿಭಾಪೂರ್ಣ ಕವಿಗೆ ಮಾತ್ರ ಸಾಧ್ಯವಾಗುವ ಕ್ರಿಯೆ. ಈ ಹಿನ್ನೆಲೆಯಲ್ಲಿ ಕಥಾವಸ್ತುವಿನ ನಿರ್ವಹಣೆಗೆ ಪೂರಕವಾದ ಉತ್ಪ್ರೇಕ್ಷೆ ಮುಂತಾದ ಅಲಂಕಾರಗಳನ್ನು ಹಾಗೂ ನಾಟಕೀಯತೆ, ರಸ ಸನ್ನಿವೇಶ ಇವೇ ಮೊದಲಾದವುಗಳನ್ನು ಔಚಿತ್ಯಪೂರ್ಣವಾಗಿ ತರುತ್ತಾನೆ. ಇದರ ನಡುವೆ ಆಡುಮಾತಿನ ಲಯ, ದೇಶೀ ಸೊಗಡು, ಮಾರ್ಗದ ಎಚ್ಚರ-ಈ ಎಲ್ಲವನ್ನು ಕಾವ್ಯದ ಪ್ರಾಣವನ್ನಾಗಿಸುತ್ತಾನೆ.

ಹೀಗೆ ಸಾಂಸ್ಥಿಕ ಮತ್ತು ಕಾವ್ಯ-ಈ ಎರಡೂ ಧರ್ಮಗಳಿಗೆ ಬದ್ಧನಾದ ಕವಿ ಈ ನೆಲೆಯಲ್ಲಿ ನೆಲದ ಧರ್ಮಕ್ಕೂ ಬದ್ಧನಾಗುತ್ತಾನೆ. ಈ ಮೂಲಕ ಕನ್ನಡ ನಾಡು-ನುಡಿ ಪರವಾದ ಪ್ರಜ್ಞೆಯನ್ನು ಮೆರೆಯುತ್ತಾನೆ. ಇದನ್ನು ವಿವರಿಸುವುದಾದರೆ-ಹರಿಶ್ಚಂದ್ರನು ಬೇಟೆಯ ನೆಪದಲ್ಲಿ ಶೈವ ಧಾರ್ಮಿಕ ಕೇಂದ್ರಕ್ಕೆ ಬರಬೇಕೆಂಬುದು ಕವಿಯ ಒತ್ತಾಸೆ. ಆದರೆ ಅದರಲ್ಲೂ ನಿಶ್ಚಿತವಾಗಿ ಹಂಪೆಗೆ ಬರಬೇಕೆಂದೇನೂ ಇಲ್ಲ. ಅಂತಹ ಶೈವ ಧಾರ್ಮಿಕ ಕೇಂದ್ರಗಳು ಅಯೋದ್ಯೆಗೆ ಹತ್ತಿರದಲ್ಲಿ ಕಾಶಿಯೇ ಮುಖ್ಯವಾಗಿ ಇತ್ತು. ಶ್ರೀಶೈಲಕ್ಕೂ ಹೋಗಬಹುದಿತ್ತು. ಆದರೆ ಹರಿಶ್ಚಂದ್ರ ಅಲ್ಲೆಲ್ಲಿಗೂ ಹೋಗದೆ, ಅವುಗಳಿಗಿಂತಲೂ ದೂರವಾದ ಹಂಪೆಗೇ ಬಂದಿದ್ದಾನೆ ಎಂದರೆ, ಅವನ ಒಳಗೆ ಹಂಪೆಯ ನಿವಾಸಿ ರಾಘವಾಂಕನೇ ಅಂತರ್ಗತನಾಗಿದ್ದಾನೆ ಅಥವಾ ಅವನನ್ನೇ ಗುರುತಿಸಲು ಸಾಧ್ಯವಾಗುತ್ತದೆ (ಇಲ್ಲಿ ಬನವಾಸಿಯ ‘ಅರ್ಜುನ’ನನ್ನೂ ನೆನೆಸಿಕೊಳ್ಳಬಹುದು). ಹೀಗೆ ಹರಿಶ್ಚಂದ್ರ ಹಂಪೆಗೆ ಬಂದದ್ದು ಮಾತ್ರವಲ್ಲದೆ ಕಿಷ್ಕಿಂದಾಚಲದ ಸೌಂದರ್ಯ ಮತ್ತು ಶಾಂತತೆಯನ್ನು ಹಲವಾರು ಪದ್ಯಗಳಲ್ಲಿ ದೀರ್ಘವಾಗಿ ಭಾವುಕವಾಗಿ ವರ್ಣಿಸುತ್ತಾನೆ. ಅಲ್ಲದೆ, ಕವಿ ಶೈವ ಧರ್ಮೀಯನಾದ ವಸಿಷ್ಠನ ಆಶ್ರಮವನ್ನು ಸಹ ಇಲ್ಲಿಯೇ ಸ್ಥಾಪಿಸಿದ್ದಾನೆ. ಈ ಆಶ್ರಮಕ್ಕೂ ಹರಿಶ್ಚಂದ್ರ ಬರುತ್ತಾನೆ. ಗುರುವನ್ನು ವಂದಿಸುತ್ತಾನೆ. ಹಿತವಚನ ಕೇಳುತ್ತಾನೆ. ಅಂತಿಮವಾಗಿ ವಿರೂಪಾಕ್ಷನನ್ನು ಸಂದರ್ಶಿಸಿ, ಪುನೀತ ಭಾವವನ್ನು ತಾಳಿ, ದೂರದ ಅಯೋದ್ಯೆಗೆ ಸುಲಭವಾಗಿಯೆ ಮರಳುತ್ತಾನೆ.

ಹೀಗೆ ಅಯೋದ್ಯಾಪುರದ ಅರಸ ಬೇಟೆಯನ್ನು ಅಲ್ಲಿಂದ ಆರಂಭಿಸಿ ಕಿಷ್ಕಿಂಧಾಚಲದವರೆಗೂ ವಿಸ್ತರಿಸಿದ್ದು ಔಚಿತ್ಯಪೂರ್ಣವೇ ಎಂಬ ಪ್ರಶ್ನೆ ಎದ್ದರೂ ಅದಕ್ಕೆ ಭೂಗೋಳಾತ್ಮಕವಾದ ಉತ್ತರವನ್ನು ಕೊಡುವುದು ಉಚಿತವಲ್ಲ. ಕಾರಣ, ಇದು ಕಾವ್ಯ ವಸ್ತುವಿನ ದೃಷ್ಟಿಯಿಂದ ಅನೌಚಿತ್ಯವೇನೂ ಆಗಲಾರದು.

ಹೀಗೆ ಹರಿಶ್ಚಂದ್ರ ಕತೆಯ ಒಂದು ಪ್ರಸಂಗವನ್ನು ಕನ್ನಡ ನೆಲದಲ್ಲಿ ನಡೆಯಿಸುವ ಮೂಲಕ, ವಸಿಷ್ಠ ಮತ್ತು ಆಶ್ರಮವನ್ನು ಇಲ್ಲಿ ಪ್ರತಿಷ್ಠಾಪಿಸುವ ಮೂಲಕ ಹಾಗೂ ಇಂತಹ ಶೈವ ಧಾರ್ಮಿಕ ಕ್ಷೇತ್ರಕ್ಕೆ ತನ್ನ ಕಾವ್ಯ ನಾಯಕನನ್ನು ಎಳೆದು ತರುತ್ತ ಅವನನ್ನೂ ಶೈವನನ್ನಾಗಿ ಕಂಡರಿಸಿದ್ದು ಮಾತ್ರವಲ್ಲದೆ, ತಾನು ಕವಿಯಾಗಿಯೂ ಶೈವ ಧರ್ಮದ ಬಗೆಗಿನ ಬದ್ಧತೆಯನ್ನು ಉಳಿಸಿಕೊಳ್ಳುವ ಮೂಲಕ ರಾಘವಾಂಕ ತನ್ನ ಅನನ್ಯತೆಯನ್ನು ಸಾಬೀತುಗೊಳಿಸುತ್ತಾನೆ.

ಹೀಗೆ ಇಡೀ ಕಾವ್ಯದಲ್ಲಿ ರಾಘವಾಂಕ ಈ ಮೂರು ‘ಧರ್ಮ’ಗಳಿಗೆ ಬದ್ಧನಾಗುವ ಮೂಲಕ ಕವಿಯಾಗಿ, ಶೈವನಾಗಿ ಮತ್ತು ಕನ್ನಡಿಗನಾಗಿ ನಿಲ್ಲುವುದು ವಿಶಿಷ್ಟ ಸಂಗತಿಗಳಲ್ಲೊಂದು ಎನ್ನಿಸುತ್ತದೆ.
*****
೨೦೦೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲ ತೆಗೆಯಮ್ಮ
Next post ಆಸೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys